== ಕುಮಾರವ್ಯಾಸನ ಮುಂಡಿಗೆಗಳು == ಕುಮಾರವ್ಯಾಸನ 'ಮುಂಡಿಗೆ' ಗಳು -ಅಥವಾ ಒಗಟು ಪದ್ಯಗಳು ; ಕುಮಾರವ್ಯಾಸ ಭಾರತದಲ್ಲಿ ಅನೇಕ ಮುಂಡಿಗೆಗಳು ಅಥವಾ ಒಗಟು ಪದ್ಯಗಳಿವೆ. ಅವಕ್ಕೆ ಅರಿತ ವ್ಯಾಖ್ಯಾನ ಕಾರರಿಲ್ಲದಿದ್ದರೆ ಅರ್ಥ ವಾಗುವುದುಕಷ್ಟ. : ಉದಾಹರಣೆಗೆ :- ಪದ್ಯ :- ವೇದ ಪುರುಷನ ಸುತನ ಸುತನ ಸ ಹೋದರನ ಹೆಮ್ಮಗನ ಮಗನ ತ ಳೋದರಿಯ ಮಾತುಳನ ರೂಪನನತುಳ ಭುಜ ಬಲದಿ | ಕಾದಿ ಗೆಲಿದನಣ್ಣನವ್ವೆಯ ನಾದಿನಿಯ ಜಠರದಲಿ ಜನಿಸಿದ ನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ || - ಪದ ವಿಂಗಡನೆ : ವೇದ ಪುರುಷನ ಸುತನ ಸುತನ ಸ ಹೋದರನ ಮೊಮ್ಮಗನ ಮಗನ ತಳೋದರಿಯ ಮಾತುಳನ ರೂಪನನು ಅತುಳ ಭುಜ ಬಲದಿ ಕಾದಿ ಗೆಲಿದನ ಅಣ್ಣನ ಅವ್ವೆಯ ನಾದಿನಿಯ ಜಠರದಲಿ ಜನಿಸಿದ ಅನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ - ಅರ್ಥ:- ವೇದ ಪುರುಷನ -ನಾರಾಯಣನ ; ಸುತನ -ಬ್ರಹ್ಮನ ; ಸುತನ -ನಾರದನ ; ಸಹೋದರನ - ಮರೀಚಿಯ ; ಹೆಮ್ಮಗನ - ಇಂದ್ರನ (ಮರೀಚಿಯ ಮೊಮ್ಮಗ) (ಬ್ರಹ್ಮನ ಮಗ ಮರೀಚಿ, ಮರೀಚಿಯ ಮಗ ಕಶ್ಯಪ -ಅವನ ಮಗ ಇಂದ್ರ ) ಮಗನ - ಅರ್ಜುನನ ; (ಇಂದ್ರನ ಮಗ-ಅರ್ಜುನ) ತಳೋದರಿಯ - ಸುಭದ್ರೆಯ : ಮಾತುಳನ -ಮಾವನ ಕಂಸನ (ಎಂದರೆ ಸುಭದ್ರೆಯ ತಾಯಿ ದೇವಕಿ -ದೇವಕಿಯ ತಂದೆ ದೇವಕ, ದೇವಕನ ಅಣ್ಣ ಉಗ್ರಸೇನ , ಉಗ್ರಸೇನನ ಮಗ ಕಂಸ ; ಆದ್ದರಿಂದ ದೇವಕಿಗೆ ಕಂಸ ಅಣ್ಣ -ದೊಡ್ಡಪ್ಪನ ಮಗ ; ಸುಭದ್ರೆಗೆ ದೇವಕಿಯ ಅಣ್ಣ ಕಂಸ ಸೋದರಮಾವ ; ) ರೂಪನನು - ಕಂಸನಿಗೆ ಸರಿಸಮಾನನು - ಜರಾಸಂಧನನ್ನು ; ಅತುಳ ಭುಜ ಬಲದಿ - ಅಸಾಧಾರಣ ಭುಜ ಬಲದಿಂದ ; ಕಾದಿ ಗೆಲಿದನ - ಯುದ್ಧ ಮಾಡಿ ಗೆದ್ದವನ -ಭೀಮನ ; ಅಣ್ಣನ -ಯುಧಿಷ್ಠಿರನ ; ಅವ್ವೆಯ - ತಾಯಿಯ ಎಂದರೆ ಕುಂತಿಯ ; ನಾದಿನಿಯ - ದೇವಕಿಯ (ಕುಂತಿಯ ತಮ್ಮ ವಸುದೇವ , ತಮ್ಮನ ಹೆಂಡತಿ - ನಾದಿನಿ- ನಾದಿನಿಯು -ವಸುದೇವನ ಪತ್ನಿ ದೇವಕಿ) ; ನಾದಿನಿಯ ಜಠರದಲಿ ಜನಿಸಿದ - ದೇವಕಿಯ ಗರ್ಭದಲ್ಲಿ ಜನಿಸಿದ ; ಅನಾದಿ ಮೂರುತಿ -ಆದಿ ಇಲ್ಲದ ದೇವ ;(ಕೃಷ್ಣ ) ಸಲಹೊ - ಕಾಪಾಡು ; ಗದುಗಿನ ವೀರನಾರಯಣ - ಗದುಗಿನ ದೇವಾಲಯದಲ್ಲಿರುವ - ವೀರ ನಾರಾಯಣ . - == ಪದ್ಯ ೨ == ಒಂದರಿಂದೆರಡಹುದನರಿ ಮೂ ರಂದವನು ತಿಳಿ ನಾಲ್ಕರಲಿ ಮನ ಗುಂದದಿರೈದರಲಿ ವರ್ಜಿಪುದಾರೇಳರಲಿ | ಒಂದಿಸದಿರೆಂಟನು ವಿಚಾರಿಸಿ ಮುಂದುವರಿದೊಂಭತ್ತರಲಿ ಮನ ಗುಂದಿಸದೀರೈದರಲಿ ಭೂಪಾಲ ಕೇಳೆಂದ|| ಪದ ವಿಂಡಣೆ : ಒಂದರಿಂದ ಎರಡು ಅಹುದನು ಅರಿ, ಮೂರು ಅಂದವನು ತಿಳಿ, ನಾಲ್ಕರಲಿ ಮನ , ಕುಂದದಿರು, ಐದರಲಿ , ವರ್ಜಿಪುದು ಆರು ಏಳರಲಿ ಒಂದಿಸದಿರು, ಎಂಟನು ವಿಚಾರಿಸಿ , ಮುಂದುವರಿದು ಒಂಭತ್ತರಲಿ, ಮನ ಕುಂದಿಸದಿರು ಈರು ಐದರಲಿ, ಭುಪಾಲ ಕೇಳು ಎಂದ. ಅರ್ಥ ಒಂದರಿಂದ - ಮೂಲ ಚೈತನ್ಯವಾದ ಆ ಪರಬ್ರಹ್ಮ ದಿಂದ ; ಎರಡು ಅಹುದನು ಅರಿ - ಪರಮಾತ್ಮ ಜೀವಾತ್ಮ ವಾಗಿ ಈ ಮಾನವ ಸೃಷ್ಟಿಯಾಗಿರುವುದನ್ನು ತಿಳಿ ; ಮೂರು ಅಂದವನು ತಿಳಿ - ಈ ಜಗತ್ತಿನ ನಡವಳಿಕೆಗೆ ಸತ್ವ, ರಜ,,ತಮ, ಈ ಮೂರು ಗಣ ತ್ರಯಗಳು ಕಾರಣವೆಂಬುದನ್ನು ತಿಳಿದುಕೋ ; ನಾಲ್ಕರಲಿ ಮನ - ಧರ್ಮ,ಅರ್ಥ, ಕಾಮ, ಮೋಕ್ಷ ಈನಾಲ್ಕರಲ್ಲೂ ಮನಸ್ಸಿರಲಿ, ಅವನ್ನು ಸಾಧಿಸಬೇಕೆಂಬ ಗುರಿ ಇರಲಿ ; ಕುಂದದಿರು, ಐದರಲಿ - ಪಂಚೇಂದ್ರಿಗಳಿಗೆ (ನೇತ್ರಗಳು, ನಾಸಿಕ, ಶ್ರೋತೃ/ ಕಿವಿ , ಜಿಹ್ವಾ/ನಾಲಿಗೆ, ತ್ವಕ್ / ಚರ್ಮ) ; ವರ್ಜಿಪುದು -ಇವುಗಳಿಗೆ ವಶನಾಗಬೆಡ ; ಆರು ಏಳರಲಿ -ಅರಿಷಡ್ವರ್ಗಗಳನ್ನೂ (ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ) ಮತ್ತು ಸಪ್ತ ವ್ಯಸನ ಗಳಾದ ಸ್ತ್ರೀ,ಅಕ್ಷ, ಮೃಗಯೆ, ಪಾನ, ವಾಕ್ಪಾರುಷ್ಯ , ಅರ್ಥದೂಷಣೆ , ದಂಡಪಾರುಷ್ಯ -ಇವುಗಳಿಂದ ; ಒಂದಿಸದಿರು - ದೂರವಿರು, ; ಎಂಟನು ವಿಚಾರಿಸಿ - ಅಷ್ಠಾಂಗ ಯೋಗವನ್ನು ಅರಿತು (ಯಮ,ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ,ಧಾರಣ, ಸಮಾಧಿ) ; ಮುಂದುವರಿದು ಒಂಭತ್ತರಲಿ - ನವ ವಿಧ ಭಕ್ತಿಯಲ್ಲಿ (ಶ್ರವಣ, ಸ್ಮರಣ, ಕ್ಭಿರ್ತನ, ವಂದನ, ಅರ್ಚನ, ಪಾದ ಸೇವನ, ಸಖ್ಯ, ದಾಸ್ಯ, ಆತ್ಮ ನಿವೇದನ) ಮನಸ್ಸನ್ನಿಡು (ಮುಂದುವರಿ) ; ಮನ ಕುಂದಿಸದಿರು ಈರು ಐದರಲಿ, (ಎರಡು+ಐದು=ಹತ್ತು) ; ಇವುಗಳ ಜೊತೆಯಲ್ಲಿ ಕ್ಷಮೆ, ಮಾರ್ದವತೆ, ಆರ್ಜವ (ಪ್ರಾಮಣಿಕತೆ), ಶೌಚ, ಸತ್ಯ,ಸಂಯಮ, ತಪಸ್ಸು (ಶುದ್ಧ ಚಿಂತನೆ), ತ್ಯಾಗ, ಪರದ್ರವ್ಯದಲ್ಲಿ ಅನಪೇಕ್ಷೆ, ಬ್ರಹ್ಮಚರ್ಯ ಈ ಹತ್ತು ಸಾಮಾನ್ಯ ಧರ್ಮಗಳನ್ನು ; ಮನ ಕುಂದದಿರು -ಮನಸ್ಸನ್ನು ಕುಂದಿಸಬೇಡ- ಧರ್ಮವನ್ನು ಬಿಡದೆ ಅನುಸರಿಸು ಭೂಪಾಲ ಕೇಳು ಎಂದ. ಈ ಪದ್ಯಕ್ಕೆ ರಾಜನೀತಿಗೆ ಅನುಗುಣವಾಗಿ ಬೇರೊಂದು ಬಗೆಯ ಅರ್ಥವನ್ನೂ ಹೇಳುತ್ತಾರೆ == ಪದ್ಯ ೨ : ರಾಜ ನೀತಿಯ ಪ್ರಕಾರ == ಒಂದರಿಂದ -ಬುದ್ಧಿ ಅಥವಾ ವಿವೇಕದಿಂದ, ಎರಡನು -ಕರ್ತವ್ಯ ಮತ್ತು ಅಕರ್ತವ್ಯಗಳನ್ನು ಅರಿ -ವಿಚಾರ ಮಾಡು, ಮೂರು ಅಂದವನು ತಿಳಿ - ಶತ್ರುಗಳು ಯಾರು, ಮಿತ್ರರು ಯಾರು , ಉದಾಸೀನರು ಯಾರುಎಂಬುದನ್ನು ಅರಿತು, ನಾಲ್ಕರಲಿ - ಸಾಮ, ದಾನ, ಬೇಧ, ದಂಡ ವೆಂಬ ಚತುರೋಪಾಯಗಳನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸು, ಮನಗುಂದದಿರು ಐದರಲಿ - ಪಂಚೇಂದ್ರಿಗಳಿಗೆ ವಶನಾಗ ಬೇಡ, ಆರನು - ಸಂಧಿ, ವಿಗ್ರಹ, ಯಾನ, ಆಸನ, ದ್ವೈದೀ ಭಾವ, ಸಮಾಶ್ರಯ, ಎಂಬ ರಾಜನೀತಿಯನ್ನು ಸಮಯಾನುಸಾರ ಉಪಯೋಗಿಸಿ, ವರ್ಜಿಪುದು ಏಳರಲಿ - ಸ್ತ್ರೀ , ಜೂಜು , ಬೇಟೆ, ಮದ್ಯ, ಕಠೋರ ವಚನ, ಕ್ರೂರ ದಂಡನೆ, ದುಂದುಗಾರಿಕೆ, ಈ ಸಪ್ತ ವ್ಯಸನ ಗಳಿಂದ ದೂರವಿರು., ಹೀಗೆ ಮನಸ್ಸನು ಹಿಡಿತದಲ್ಲಿ ಇಟ್ಟುಕೊಂಡು, ಅಷ್ಟಾಂಗ ಯೋಗವನ್ನು ಸಾಧನೆ ಮಾಡಿ, ನವ ವಿಧ ಭಕ್ತಿಯನ್ನು ರೂಡಿಸಿಕೊಂಡು, ದಶ ಧರ್ಮಗಳನ್ನು ಪಾಲಿಸು, ಇದರಿಂದ ಮಾನಸಿಕ ನೆಮ್ಮದಿ ದೊರಕುವುದು- == ಪದ್ಯ ೩ == ಮುಂದುವರೆಸಿ - == ಆಧಾರ == ಗಮಕಸಿರಿ -ಸ್ಮರಣ ಸಂಚಿಕೆ ೧೯೯೭ -( ಶ್ರೀ ಜಗನ್ನಾಥ ಶಾಸ್ತ್ರೀ) == ನೋಡಿ == ಗದುಗಿನ ಭಾರತ / ಕುಮಾರವ್ಯಾಸ ಭಾರತ ಮುಂಡಿಗೆಗಳು == ಉಲ್ಲೇಖ ==